ಮಳೆಗಾಲದಲ್ಲಿ ಕರಾವಳಿ...ಭಾಗ 2

ಉಡುಪಿಯು ಹೊಸದಲ್ಲದಿದ್ದರು, ಅದರ ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು ನನಗೆ ಹೊಸದಾಗಿತ್ತು. ಶ್ರೀ ಕೃಷ್ಣನ ದರ್ಶನವಾದ ಮೇಲೆ ನನ್ನ ಮನಸ್ಸಿಗೆ ಮೂಡಿದ್ದು "ಶ್ರೀ ಕ್ಷೇತ್ರ ಮಂದಾರ್ತಿ"ಯ ಸಂದರ್ಶನ. ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಾಲಯವು ಬಹಳ ಪ್ರಸಿದ್ದಿ ಹೊಂದಿದ್ದು, ಅದರ ಮಹಿಮೆ ಅಪಾರ ಎಂಬುದು ನಾನು ಹಲವರಿಂದ ಕೇಳಿದ್ದೆ. ಉಡುಪಿ ಇಂದ ಕೇವಲ ೫೦ ಕಿ.ಮೀ ದೂರದಲ್ಲಿರುವ ಈ ಸಣ್ಣ ಹಳ್ಳಿಗೆ ಬಸ್ಸಿನ ಸೌಕರ್ಯ ಚೆನ್ನಾಗಿದೆ.

ನನ್ನಂತಹ ಏಕಾಂಗಿ ಪ್ರಯಾಣಿಕನಿಗೆ ಸ್ಥಳೀಯ ಸಾರಿಗೆ ಬಹಳ ಉಪಕಾರಿಯಾಗುವುದು. ನನಗೆ ಬಹಳ ಖುಷಿ ಕೊಡುವ ವಿಚಾರ  ಎಂದರೆ ದಕ್ಷಿಣ ಕನ್ನಡದ ಸಾರಿಗೆ..! ಬಹಳಷ್ಟು ಜನರಿಗೆ ಅನುಕೂಲವಾಗಿರುವ ಈ ಸಾರಿಗೆ ವಿಧಾನ ಇಡೀ ರಾಜ್ಯಕ್ಕೆ ಮಾದರಿ ಆಗಿದೆ ಎಂದರೆ ತಪ್ಪಾಗಲಾರದು. ಸಮಯಕ್ಕೆ ಸರಿಯಾಗಿ ಹೊರಡುವ ಹಾಗು ತಲುಪುವ ಸಣ್ಣ ಬಸ್ಸುಗಳು ಇಲ್ಲಿ ಮನೆ ಮನೆಯವರಿಗೂ ಚಿರ ಪರಿಚಿತ. ಮಂದಾರ್ತಿಗೆ ಹೋಗುವ ಬಸ್ಸೊಂದನ್ನು ಹತ್ತಿ ಕೌತುಕದಿಂದ ಕುಳಿತೆನು.

ಮೋಡ ಮುಸುಕಿದ ವಾತಾವರಣ, ಅಲ್ಲಲ್ಲಿ ಮಳೆ, ಮಳೆಯಿಂದ ಚಿಗರಿರುವ ಗಿಡ-ಬಳ್ಳಿಗಳು, ತುಂಬಿ ಹರಿಯುವ ನದಿಗಳು, ಹೀಗೆ ಹತ್ತು ಹಲವು ಸುಂದರ ಚಿತ್ರಣ ನೋಡುತ್ತಾ ಮಂದಾರ್ತಿಯ ಕಡೆ ಪ್ರಯಾಣ ಬೆಳೆಸಿದೆನು.

ಕಿಟಕಿಯ ಪಕ್ಕ ಕುಳಿತು ತಂಪಾದ ಗಾಳಿಯನ್ನು ಸವಿಯುವುದೇ ಒಂದು ದಿವ್ಯ ಅನುಭವ.!
ನೋಡನೋಡುತ್ತಲೇ ಶ್ರೀ ಕ್ಷೇತ್ರವು ಸಮೀಪಿಸಿತು. ದೇವಸ್ಥಾನದಿಂದ ಸಂಗೀತ ಕೇಳಲ್ಪಟ್ಟಿತು. ದೇವಸ್ಥಾನದ ಪ್ರಾಂಗಣದಲ್ಲಿ ಹಲವು  ಅಂಗಡಿ ಮುಂಗಟ್ಟುಗಳು ಹಣ್ಣು ಕಾಯಿ, ಕಡ್ಡಿ ಕರ್ಪೂರ ಮಾರಾಟಕ್ಕಿದ್ದರು. ದೇವಾಲಯದಿಂದ ಓಂಕಾರ ನಾದ ಹೊರಬರುತ್ತಿತ್ತು.

ಶ್ರೀ ಕ್ಷೇತ್ರ ಮಂದಾರ್ತಿ: ದುರ್ಗಾಪರಮೇಶ್ವರಿ ದೇವಸ್ಥಾನ. 
ದೇವಸ್ಥಾನವು ವಿಶಾಲವಾಗಿದ್ದು ಅದರ ಎರಡು ಬದಿಯಲ್ಲಿ ಅಚ್ಚುಕಟ್ಟಾಗಿ ಕಟ್ಟಿರುವ ಯಾತ್ರಿಗಳ ತಂಗುದಾಣ ಕಾಣಬಹುದು. ಗರ್ಭಗುಡಿಯಲ್ಲಿರುವ ಶ್ರೀ ದುರ್ಗಾ ಪರಮೇಶ್ವರಿ ಮೂರ್ತಿಯು ನನ್ನನ್ನು ಶಾಂತನನ್ನಾಗಿ ಮಾಡಿತು. ದೇವಿಯ ಎದುರು ಮನಸ್ಸಿಗೆ ಸಂತೋಷವಾಗುವಷ್ಟು ನಿಂತು ತದನಂತರ ಪವಿತ್ರವಾದ ಪ್ರಸಾದ ಸ್ವೀಕರಿಸಿ ಅಲ್ಲಿಂದ ಹೊರಟೆನು.

ನನ್ನ ಮುಂದಿನ ನಿಲ್ದಾಣ: ಬಾರಕೂರು ಶ್ರೀ ಕಾಳಿಕಾಂಭ ದೇವಾಲಯ.

ಮಂದಾರ್ತಿಯಿಂದ ೮ ಕಿ.ಮೀ ದೂರದಲ್ಲಿರುವ ಬಾರಕೂರು, ಶ್ರೀ ಕ್ಷೇತ್ರವೇ ಹೌದು. ಅಲ್ಲಿನ ಶ್ರೀ ಕಾಳಿಕಾಂಭ ಮತ್ತು ಪಂಚಲಿಂಗೇಶ್ವರ ದೇವರುಗಳು ಕರಾವಳಿಯಲ್ಲಿ ಮನೆಮಾತಾಗಿದೆ.

ಬಾರಕೂರು ಶ್ರೀ ಕ್ಷೇತ್ರ: ಶ್ರೀ ಕಾಳಿಕಾಂಭ ದೇವಸ್ಥಾನ.
ದೇವಸ್ಥಾನವು ಚಿಕ್ಕಾವಾಗಿ ಚೊಕ್ಕವಾಗಿ ಇದ್ದು ಅದರ ಪ್ರಾಂಗಣ ಬಹಳ ಶುಚಿಯಾಗಿತ್ತು. ದೇವಾಲಯದ ಗರ್ಭಗುಡಿಯಲ್ಲಿ ದೇವಿಯ ಮೂರ್ತಿಯು ಚಿಕ್ಕದಿದ್ದರೂ; ಆಕರ್ಷಕವಾಗಿದೆ..! ಮನಸ್ಸಿಗೆ ಆನಂದ ಉಂಟು ಮಾಡಿತು ಈ ದೇವಾಲಯ. ಸ್ವಲ್ಪ ಹೊತ್ತು ದೇವರ ಧ್ಯಾನವನ್ನು ಮಾಡಿ ಅಲ್ಲಿಂದ ಪುನಃ ಉಡುಪಿಯ ಕಡೆಗೆ ಪ್ರಯಾಣ ಬೆಳೆಸಿದೆ.

ಬ್ರಹ್ಮಾವರದ ಬಳಿ ಒಂದು ನದಿ. 
ಇವೆರಡು ಅದ್ಭುತ ಜಾಗಗಳ ಸಂದರ್ಶನ ಮಾಡಿ ಬಂದ ನನಗೆ ಉಡುಪಿಯ ಐಡಿಯಲ್ ಐಸ್ ಕ್ರೀಮ್ಸ್ ನ "ಸ್ಪೆಷಲ್ ಗಡ್-ಬಡ್" ಕೈ ಬೀಸಿ ಕರೆಯಿತು.

ಸ್ಪೆಷಲ್ ಗಡ್-ಬಡ್. 
ಉಡುಪಿಯ ಸ್ವಚ್ಛ ರಸ್ತೆಗಳು ಮತ್ತು ಕಾಲುದಾರಿ. 
ಮುಂದೆ ಎತ್ತ ಕಡೆ ಪ್ರಯಾಣ ಮಾಡುವ ಯೋಚನೆಯಲ್ಲಿದ್ದಾಗ ಹೊಳಿದಿದ್ದೇ "ದಕ್ಷಿಣ ಕಾಶಿ: ಗೋಕರ್ಣ".

ಮುಂದಿನ ಅಧ್ಯಾಯದಲ್ಲಿ ಗೋಕರ್ಣದ ಅನುಭವಗಳು.

Comments

Popular Posts