ಮಳೆಗಾಲದಲ್ಲಿ ಕರಾವಳಿ...ಭಾಗ 1

ಪ್ರವಾಸ: ಮನಸ್ಸಿಗೆ ಮುದ ನೀಡುವ ಚಟುವಟಿಕೆ. ನಮ್ಮ ತನು ಮನದಲ್ಲಿರುವ ದುಗುಡ ದುಮ್ಮಾನಗಳಿಗೆ ಅಂತ್ಯಕೊಟ್ಟು ಸಹಜ ಸ್ಥಿತಿಗೆ ತರುವ "ಪ್ರವಾಸ", ನನಗೆ ಬಾಲ್ಯದಿಂದಲೂ ಬಹಳ ಅಚ್ಚು ಮೆಚ್ಚು. "ದೇಶ ಸುತ್ತು ಕೋಷ ಓದು" ಎಂಬುದಾಗಿ ಹಿರಿಯರು ಹೇಳಿರುವುದು ಎಷ್ಟು ಸತ್ಯವೆಂದು ಪ್ರವಾಸದ ಹಾದಿಯಲ್ಲಿ ಅರಿವಾಗುತ್ತದೆ. ನಮ್ಮ ನಾಡು, ನಮ್ಮ ಭಾಷೆ, ನಮ್ಮ ಸಂಸ್ಕೃತಿ, ಹೀಗೆ ಹಲವು ವಿಚಾರಗಳನ್ನ ತಿಳಿದುಕೊಳ್ಳುವ ಅವಕಾಶ ಪ್ರವಾಸದಲ್ಲಿಸಿಗುತ್ತದೆ. ಹೊಸ ಮುಖಗಳ ಪರಿಚಯವಾಗುತ್ತದೆ, ಹೊಸ ಜಾಗಗಳ ಪರಿಚಯವಾಗುತ್ತದೆ, ಇದರಿಂದ ಹೊಸ ಅನುಭವ ಉಂಟಾಗುತ್ತದೆ. 

ಸದಾ ಸಂಘಜೀವಿಯಾಗಿ ತಿರಿಗಾಡುವ ನಾನು, ಬಹಳ ವರ್ಷಗಳ ನಂತರ ಒಬ್ಬಂಟಿಯಾಗಿ ಓಡಾಡುವ ಹಾಗೆ ಅನಿಸಿತು. ನಮ್ಮ ರಾಜ್ಯದ ಅದ್ಭುತ ಜಾಗಗಳ ಅವಲೋಕನ ಮಾಡುತ್ತಾ ಇದ್ದಾಗ ನನಗೆ ಹೊಳಿದಿದ್ದು "ಕರಾವಳಿ". 

ಕರಾವಳಿ ಎಂದರೆ ನನಗೆ ವಿಶೇಷ ಪ್ರೀತಿ. ಬಿರು ಬಿಸಿಲು, ಸೆಖೆ, ಬೆವರು ಇವೆಲ್ಲವಿದ್ದರೂ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗುವುದು ಬಹಳ ಸುಲಭ. ಒಂದು ಬಳಿ ಪಟ್ಟಣ ಇದ್ದರೆ, ಇನ್ನೊಂದು ಬಳಿ ನೀಲಿ ಸಮುದ್ರ. ಅಂತ್ಯ ಕಾಣದ ಕಡಲ ತೀರ, ಸಮುದ್ರವನ್ನು ತಲುಪಿ ತನ್ನ ಗಮ್ಯವನ್ನು ಮುಗುಸಿವ ನದಿಗಳು, ಸುಂದರ ಬೆಟ್ಟ ಗುಡ್ಡಗಳು, ಆಕರ್ಷಕ ಸಸ್ಯ ರಾಶಿ, ಹಲವು ಬಣ್ಣಗಳ ಪಕ್ಷಿ-ಚಿಟ್ಟೆಗಳ ಸಂಕುಲ, ಆಧ್ಯಾತ್ಮಕತೆಯನ್ನು ಎತ್ತಿ ಹಿಡಿಯುವ ದೇವಾಲಯಗಳು, ಹೀಗೆ ಹಲವು ವಿಶೇಷತೆಗಳನ್ನೊಳಗೊಂಡ ಈ ಪ್ರದೇಶ ಬೆಂಗಳೂರುನಂಥ ಮಹಾ ನಗರಿಯಿಂದ ಬಹಳ ದೂರದಲ್ಲಿದೆ, ಆದರೆ ಬಸ್ಸುಗಳ ಕೊರತೆ ಖಂಡಿತ ಇಲ್ಲ.

ಹೀಗೆ ಯೋಚಿಸುತ್ತ ಜಯನಗರದ ಬಸ್ಸು ನಿಲ್ದಾಣಕ್ಕೆ ಬಂದ ನನಗೆ ಮೊದಲು ಕಂಡಿದ್ದು ಒಂದು ಖಾಸಗಿ ಬಸ್ಸು. ಅದರ ಮೇಲೆ "ಕುಂದಾಪುರ" ಎಂದು ಬರೆದಿತ್ತು. ನನ್ನ ದ್ವಂದತೆಯನ್ನು ಕಂಡ ಆ ಬಸ್ಸಿನ ಚಾಲಕ ನನ್ನನ್ನು "ಸಾರ್ ಎಲ್ಲಿಗ್ ಹೋಗಬೇಕು?" ಎಂದು ಕೇಳಿದ. ನಾನು "ನೀವು ಉಡುಪಿಗೆ ಹೋಗುತ್ತೀರಾ?"  ಎಂದು ಕೇಳಿದೆನು. ಅವನು ತೆಳ್ಳನೆ ನಗೆ ಇಂದ "ಮಂಗಳೂರು, ಉಡುಪಿ, ಕುಂದಾಪುರ, ಇದು ನನ್ನ ದಾರಿ" ಎಂದನು. ಮತ್ತೆ ಯೋಚಿಸದೆ ನಾನು ಆ ಬಸ್ಸನ್ನು ಹತ್ತಿದೆನು.

ಧೋ ಎಂದು ಸುರಿಯುವ ಮಳೆ, ಎಲ್ಲೆಲ್ಲೂ ಪ್ರವಾಹ, ಕಡಲ್ಕೊರೆತ, ಗುಡ್ಡ ಕುಸಿತ....ಹೀಗಿದ್ದರೂ, ಒಮ್ಮೆ ಉಡುಪಿಗೆ ಹೋಗಿ ಶ್ರೀ ಕೃಷ್ಣನ ದರ್ಶನ ಮಾಡುವ ಹಂಬಲ ಅತಿ ಆಯಿತು. ಅದೇ ಆಸೆಯಲ್ಲಿ ನಿದ್ದೆಗೆ ಜಾರಿದ ನಾನು ಕಣ್ಣು ಬಿಟ್ಟಾಗ ಉಡುಪಿಯ ಮುಖ್ಯ ರಸ್ತೆಯಲ್ಲಿ ಇದ್ದೆ.

ಉಡುಪಿ ಶ್ರೀ ಕೃಷ್ಣ ಮಠದ ಮುಖ್ಯ ದ್ವಾರ.
ತಂಪು ಗಾಳಿ, ತುಂತುರು ಮಳೆಯ ಮಧ್ಯೆ ಕೃಷ್ಣ ಮಠದ ಕಡೆಗೆ ನಡೆದು ಹೋಗುತ್ತಿರವಾಗ ನನ್ನ ಗಮನಕ್ಕೆ ಬಂದದ್ದು ಸುಂದರ ಮನೆಗಳು. ಪ್ರತಿಯೊಬ್ಬರ ಮನೆಯ ಮುಂದೆಯೂ ಸಣ್ಣದೊಂದು ತೋಟ, ತೋಟದಲ್ಲಿ ಬಗೆ ಬಗೆಯ ಹೂವುಗಳು. ಪ್ರಾಂಗಣಕ್ಕೆ ನೀರನ್ನು ಹಾಕಿ, ರಂಗೋಲಿ ಇಟ್ಟು ತಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದ ಮಹಿಳೆಯರೊಬ್ಬರು ನನ್ನ ದೊಡ್ಡ ಬ್ಯಾಗ್ ಅನ್ನು ಕಂಡು ಮುಗುಳ್ನಗೆಯೊಂದಿಗೆ "ಎಲ್ಲಿಂದ ಬಂದದ್ದು?" ಎಂದು ಕೇಳಿದರು. ನನ್ನ ಉತ್ತರ ತಿಳಿದು -- "ಮಠದಲ್ಲಿ ಜನ ಕಮ್ಮಿ" ಎಂದು ನಕ್ಕರು. ಬೆಂಗಳೂರಿನಲ್ಲಿ ಪರರ ಬಗ್ಗೆ ಇಂತಹ ಕಾಳಜಿ ಬಹಳ ವಿರಳ ಎಂದೆನಿಸಿತು..!

ಕೃಷ್ಣ ಮಠದ ಪಕ್ಕದಲ್ಲೇ ಇರುವ ಒಂದು ತಂಗುದಾಣದಲ್ಲಿ ನಾನು ಬಿಡಾರ ಹೂಡಿದೆನು. ಸ್ನಾನ ಇತ್ಯಾದಿ ಮುಗಿಸಿ ಕೃಷ್ಣ ಮಠಕ್ಕೆ ಹೊರಟೆನು.

ಶ್ರೀ ಕೃಷ್ಣ ದೇವಾಲಯ. 
ಆ ದಿನ ಶ್ರೀ ಕೃಷ್ಣನಿಗೆ ತುಳಸಿ ಅಲಂಕಾರ...! ಜನರ ಆರ್ಭಟ ಇಲ್ಲದೆ ಇದ್ದರಿಂದ, ಪರಮಾತ್ಮನ ದರ್ಶನವು ಸಾಂಗವಾಗಿ ಆಯಿತು. ಒಂದಲ್ಲ ಎರಡಲ್ಲ, ನಾಲ್ಕೈದು ಬಾರಿ ಆ ಮುದ್ದಾದ ಕೃಷ್ಣನನ್ನು ನೋಡಿ ನನ್ನ ಮನಸ್ಸನ್ನು ಶಾಂತಿಗೊಳಿಸಿದೆ. ಭಕ್ತಾದಿಗಳು ಪಡಸಾಲೆಯ ಮೇಲೆ ಕುಳಿತು ಏಕಾತ್ತ ಚಿತ್ತದಿಂದ ಕೃಷ್ಣನ ಪಾರಾಯಣ ಮಾಡುತ್ತಿದ್ದರು. ಕೆಲುವರು ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದರು. ಹೀಗೆ ತಮ್ಮ ತಮ್ಮ ಸೇವೆಗಳನ್ನು ಭಕ್ತ್ಯಾನುಸಾರ ಮಾಡುತ್ತಿದ್ದರು. ನಾನು ಸಹ ಸ್ವಲ್ಪ ಹೊತ್ತು ಕೃಷ್ಣನ ಪಾರಾಯಣ ಮಾಡಿ, ನಮಸ್ಕರಿಸಿ ದೇವಾಲಯದಿಂದ ಹೊರಗೆ ಇರುವ ಫಲಾಹಾರ ಮಂದಿರ ಕಡೆಗೆ ಹೊರಟೆ.

ಮಿತ್ರ ಸಮಾಜ:
ಉಡುಪಿಯ ಹಲವು ವಿಶೇಷತೆಗಳಲ್ಲಿ ಮಿತ್ರ ಸಮಾಜವು ಒಂದು. ಹಲವು ವರ್ಷಗಳ ಇತಿಹಾಸ ಹೊಂದಿರುವ ಈ ಫಲಾಹಾರ ಮಂದಿರದ ಅಕ್ಕಿ ಇಡ್ಲಿ, ಮಂಗಳೂರು ಬನ್ಸ್, ಗೋಳಿ ಬಜೆ, ಮಂಚಾಮೃತ, ಇತ್ಯಾದಿ, ಬಹಳ ಪ್ರಸಿದ್ದಿ. ನಿಮ್ಮ ಉದರ ಶಾಂತಿಗೆ ಮಿತ್ರ ಸಮಾಜ ಹೇಳಿ ಮಾಡಿಸಿದ ಜಾಗ. ಒಮ್ಮೆ ಭೇಟಿ ನೀಡಿ.

ಮಿತ್ರ ಸಮಾಜ ಫಲಾಹಾರ ಮಂದಿರ. 
ಉಡುಪಿಯ ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಸಂದರ್ಶಿಸಲು ಉಡುಪಿಯಲ್ಲೆ ಉಳಿಯಿವುದು ಉತ್ತಮವೆಂದನಿಸಿತು. ದೇವಾಲಯದಲ್ಲಿ ಮಧ್ಯಾಹ್ನದ ಪ್ರಸಾದವನ್ನು ಸ್ವೀಕರಿಸಿ ಉಡುಪಿ ನಗರ ಬಸ್ ನಿಲ್ದಾಣಕ್ಕೆ ಪಾದ ಬೆಳೆಸಿದೆ.

ಮುಂದಿನ ನಿಲ್ದಾಣ:- ಶ್ರೀ ಕ್ಷೇತ್ರ ಮಂದಾರ್ತಿ, ಶ್ರೀ ಕ್ಷೇತ್ರ ಬಾರಕೂರು


Comments