ಉಡುಪಿಯಿಂದ ಗೋಕರ್ಣಗೆ ಸುಮಾರು ೪ ಗಂಟೆಗಳ ಪ್ರಯಾಣ. ಉಡುಪಿ >> ಕುಂದಾಪುರ >> ಮರವಂತೆ >> ಬೈಂದೂರು >> ಭಟ್ಕಳ >> ಮುರುಡೇಶ್ವರ >> ಹೊನ್ನಾವರ >> ಕುಮುಟಾ ಈ ರೀತಿಯಾಗಿ ಸಾಗಿ ಗೋಕರ್ಣ ಮುಟ್ಟುವಷ್ಟರಲ್ಲಿ ಸಾಕಷ್ಟು ಎಸ್ಟುರಿಗಳು, ಸೇತುವೆಗಳು ಸಿಗುವುವು. ಎಲ್ಲವು ಭಿನ್ನವಾಗಿದ್ದು, ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಒಂದು ಸಮುದ್ರ ತೀರದ ನಗರಿಯಿಂದ ಇನ್ನೊಂದು ಸಮುದ್ರ ತೀರದ ನಗರಿಗೆ ಹೋಗುವ ಸುಂದರ ಅನುಭವ ಹೇಳತೀರದು.
ಮರವಂತೆ - ನನಗೆ ವೈಯಕ್ತಿಕವಾಗಿ ನೆಚ್ಚಿನ ಕಡಲು. ನಮ್ಮ ರಾಜ್ಯದ ಸಮುದ್ರಗಳಲ್ಲಿ ಅತ್ಯಂತ ಅಪಾಯಕಾರಿ ಸಮುದ್ರ ಎಂದರೆ ತಪ್ಪಾಗಲಾರದು. ಆ ರಭಸ, ಆ ಉದ್ವೇಗ, ಆ ಭೋರ್ಗರೆತ...ಇವೆಲ್ಲವೂ ಇಲ್ಲಿ ನೋಡಬಹುದಾಗಿದೆ. ಕೆಲ ವರ್ಷಗಳ ಹಿಂದೆ ತನ್ನ ಶಕ್ತಿ ಪ್ರದರ್ಶನವನ್ನು ಹೆದ್ದಾರಿಯ ಮೇಲೆ ತೋರಿಸುತ್ತಿದ್ದ ಮರವಂತೆಯ ಅಲೆಯನ್ನು ತಡೆಯಲು ತಡೆಗೋಡೆ ಕಟ್ಟಿ ಶಾಂತನನ್ನಾಗಿ ಮಾಡುವ ಪ್ರಯತ್ನ ನಡಿಯುತ್ತಿದೆ.
 |
ಮರವಂತೆ ಕಡಲು ತೀರ. |
 |
ಕಪ್ಪು ಮೋಡ ಕರಗಿ ಮಳೆಯಾಗುವ ಕ್ಷಣ. |
 |
ಸಮುದ್ರದ ಅಲೆಯು ಹೆದ್ದಾರಿಗೆ ಬಡಿಯದೇ ಇರಲೆಂದು ಕಟ್ಟಿರುವ ತಡೆಗೋಡೆ. |
ಮಹಾ ಬ್ರಾಹ್ಮಣ -"
ರಾವಣ" ತನ್ನ ತಪಃಶಕ್ತಿಯಿಂದ ಪಡೆದ ಆತ್ಮಲಿಂಗವನ್ನು ವಟುವಿನ ರೂಪದಲ್ಲಿ ಬಂದ ಗಣೇಶನಿಗೆ ಕೊಟ್ಟು, ಮೋಸ ಹೋಗಿ, ಅದರ ಪರಿಣಾಮ ಆತ್ಮಲಿಂಗವು ಪ್ರತಿಷ್ಠಾಪನೆಯಾಗಿ ಪವಿತ್ರವಾದ "
ದಕ್ಷಿಣ ಕಾಶಿ" ಯೆಂದು
ಗೋಕರ್ಣ ಕ್ಷೇತ್ರವು ಮಾರ್ಪಾಟಾಯಿತು. ಇದಲ್ಲದೆ, ಇಡೀ ದೇಶದಿಂದ ಹಾಗು ಇತರ ದೇಶದಿಂದ ಹಲವು ಭಕ್ತಾದಿಗಳು ತಮಗೆ ಆಗಿರುವ ದೋಷದ ಪರಿಹಾರಕ್ಕೆ ಇಲ್ಲಿಗೆ ಬಂದು ಸ್ವಾಮಿಯ ಸೇವೆಯನ್ನು ಪೂರೈಸುತ್ತಾರೆ. ಒಂದು ಕಾಲದಲ್ಲಿ ಶುಭ ಮತ್ತು ವ್ಯದೀಕ ಕ್ರಿಯೆಗೆ ಬಹಳ ಬೇಡಿಕೆಯಲ್ಲಿ ಇದ್ದ ಗೋಕರ್ಣವು, ತನ್ನ ಮನಮೋಹಕ ಸಮುದ್ರಗಳಿಂದ ಪ್ರವಾಸೋದ್ಯಮವನ್ನು ಉಲ್ಬಣಗೊಳಿಸಿದೆ. ಹೀಗಾಗಿ ಇಲ್ಲಿ ಇದ್ದ ಪಾರಂಪರಿಕ ಬ್ರಾಹ್ಮಣ ಕರ್ಮಗಳು ಹಿಂದಿನ ರೀತಿಯಲ್ಲಿ ನಡಿಯದೇ ಇರುವುದು ಬಹಳ ದುಃಖದ ವಿಚಾರ.
ಧಾರಾಕಾರ ಮಳೆಯು ಗೋಕರ್ಣವನ್ನು ಆವರಿಸಿತ್ತು. ಕಿರಿದಾದ ರಸ್ತೆಗಳಲ್ಲಿ ಸಾಗುತ್ತ ನನ್ನ ಬಾಲ್ಯದ ದಿನಗಳನ್ನು ನೆನೆದೆನು. ನನ್ನ ಅಣ್ಣಂದಿರು, ಅಕ್ಕಂದಿರು, ದೊಡ್ಡಪ್ಪಂದಿರು, ಮಾವಂದಿರು, ಎಲ್ಲರು ಕೂಡಿ ಗೋಕರ್ಣಗೆ ಬಂದಿದ್ದೆವು. ನನ್ನ ತಮ್ಮನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಇಡೀ ರಾತ್ರಿ ತೋಟದ ಸೊಳ್ಳೆಯಿಂದ ರಕ್ಷಿಸಿಲು ನನ್ನ ತಂದೆ ಪಡೆದ ಕಷ್ಟ, ಇನ್ನೂ ನನ್ನ ಕಣ್ಣಿನಲ್ಲಿ ಹಸಿರಾಗಿದೆ. ಅದು ಒಂದು ಅದ್ಭುತ ಕುಟುಂಬ ಪ್ರವಾಸವಾಗಿತ್ತು..! ಕೆಲವು ಒಳ್ಳೆ ಕ್ಷಣಗಳು ಮತ್ತೆ ಮತ್ತೆ ಬರುವುದು ಬಹಳ ವಿರಳವೆನಿಸುತ್ತದೆ.
ಗೋಕರ್ಣದ
"ಓಂ ಬೀಚ್", "ಕುಡ್ಲೆ ಬೀಚ್", "ಪ್ಯಾರಡೈಸ್ ಬೀಚ್", ಹೀಗೆ ಹಲವು ಸಮುದ್ರ ತೀರಗಳು ವಿಶ್ವದಲ್ಲೇ ಖ್ಯಾತಿ ಹೊಂದಿದೆ. ನಾನೂ ಸಹ ಓಂ ಮತ್ತೆ ಕುಡ್ಲೆ ಬೀಚ್ ನೋಡಲು ಹೊರಟೆನು.
 |
ಓಂ ಬೀಚ್. |
ಆಟವಾಡಲು ಸುರಕ್ಷಿತವಾಗಿದ್ದರಿಂದ ಪ್ರವಾಸಿಗರು ಓಂ ಬೀಚ್ ಅನ್ನು ಬಹಳ ಇಷ್ಟಪಡುತ್ತಾರೆ. ಎರಡು ಬೆಟ್ಟಗಳ ಮಧ್ಯದಿಂದ ಇಳಿದು ಸಮುದ್ರವನ್ನು ಮುಟ್ಟುವ ಕ್ಷಣ ರೋಮಾಂಚಕ..!
 |
ಮಳೆಯಲ್ಲಿ ಓಂ ಬೀಚ್. |
 |
ಅಲೆಯ ರಭಸ. |
 |
ನಿಸರ್ಗದ ಮಡಿಲಲ್ಲಿ ಪ್ರವಾಸಿಗರು. |
 |
ಸೂರ್ಯಾಸ್ತದ ಸಮಯ. |
ಮಳೆಯಲ್ಲೇ ನೆನೆಯುತ್ತಾ ಪಕ್ಕದ ಗುಡ್ಡಕ್ಕೆ ಹತ್ತಿ ಕುಡ್ಲೆ ಬೀಚ್ ಗೆ ಹೋದಾಗ ಕಂಡದ್ದು
ಪ್ಲಾಸ್ಟಿಕ್ ಎಂಬ ಮಹಾ ಪೀಡೆ. ಎಲ್ಲಿ ನೋಡಿದರಲ್ಲಿ ಬಿಯರ್ ಬಾಟಲಿಗಳು, ಪ್ಲಾಸ್ಟಿಕ್ ತುಂಡುಗಳು, ಕಸದ ರಾಶಿ. ಸುಂದರ ಬೀಚನ್ನು ಕಸದ ತೊಟ್ಟಿಯಾಗಿ ಪರಿವರ್ತನೆ ಮಾಡಿರುವ ಬೇಜವಾಬ್ದಾರಿ ಪ್ರವಾಸಿಗರಿಗೆ ಏನು ಹೇಳಬೇಕೋ ತೋಚದಂತಾಯಿತು. ಪ್ರಕೃತಿ ಸೌಂದರ್ಯವನ್ನು ಶಾಶ್ವತವಾಗಿ ಕಾಪಾಡುವ ಆದ್ಯ ಕರ್ತವ್ಯ ನಮ್ಮೆಲ್ಲರದಾಗಿದೆ.
 |
ಕುಡ್ಲೆ ಬೀಚ್. |
ಕಿರು ಚಾರಣವನ್ನು ಮುಗಿಸಿ ನನ್ನ ತಂಗುದಾಣಕ್ಕೆ ಹಿಂದುರಿಗೆ ವಿಶ್ರಾಂತಿ ಪಡೆದೆನು. ತರುವಾಯ ಮುಂಜಾನೆ ಬೇಗ ಎದ್ದು ಸ್ನಾನ ಇತ್ಯಾದಿಯನ್ನು ಮುಗಿಸಿ ಮಹಾಬಲೇಶ್ವರನ ದರ್ಶನ ಪಡೆದೆನು. ಬಹಳ ವರ್ಷಗಳ ನಂತರ ಆತ್ಮಲಿಂಗದ ದರ್ಶನ ಮಾಡಿದ್ದು ನನಗೆ ಖುಷಿ ಕೊಟ್ಟಿತ್ತು. ಮಳೆಗಾಲದಲ್ಲಿ ಈ ಜಾಗವನ್ನು ಸಂದರ್ಶಿಸಿದ್ದು ಒಂದು ಅಮೋಘ ಅನುಭವ, ಅದ್ವಿತೀಯ..! ಮತ್ತೆ ಬರುವುದಾಗಿ ಹೇಳಿ ಗೋಕರ್ಣದಿಂದ ಶಿರಸಿಯ ಕಡೆಗೆ ಹೊರಟೆನು.
ಶಿರಸಿಯಲ್ಲಿ ಮಾರಿಕಾಂಬಾ ದೇವಿಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ, ಅಲ್ಲಿಂದ ಬೆಂಗಳೂರಿಗೆ ರೈಲನ್ನು ಹಿಡಿದು ನನ್ನ ಮಳೆಗಾಲದ ಪ್ರವಾಸವನ್ನು ಮುಕ್ತಾಯಗೊಳಿಸಿದೆನು.
ನಮ್ಮ ರಾಜ್ಯವು ಮಳೆಗಾಲದಲ್ಲಿ ಇನ್ನೂ ಹೆಚ್ಚು ಸುಂದರವಾಗಿ ಕಾಣುವುದು ಎಂದು ನನಗೆ ಈ ಪ್ರವಾಸದಿಂದ ಅರಿವಾಯಿತು. ಬಹಳ ಸಂತೃಪ್ತಿಯಿಂದ ನನ್ನ ಸ್ವಸ್ಥಾನಕ್ಕೆ ಮರಳಿದೆ.
Comments
Post a Comment